ಉಜ್ಜಯಿನಿ(ಬಳ್ಳಾರಿ):ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿರುವ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಪೀಠ ಇರುವ ಸ್ಥಳ. ಇಲ್ಲಿಯ ಮರುಳಸಿದ್ಧ ದೇವಾಲಯದ ವಿಶಾಲ ಸಂಕೀರ್ಣದಲ್ಲಿ ಗೌರಮ್ಮ, ವೀರಭದ್ರ, ಚೌಡೇಶ್ವರಿ, ಅರಕೆ ಬಸವಣ್ಣ, ಬಂಗಾರ ಬಸವಣ್ಣ, ಮುದ್ದಿರಾಮ, ಗುಂಡ ಬ್ರಹ್ಮಯ್ಯರ ಕಿರು ದೇವಾಲಯಗಳಿವೆ ಮತ್ತು ಸಿದ್ಧಲಿಂಗ ಶಿವಚಾರ್ಯರ ಗದ್ದುಗೆ ಇದೆ. ಮರುಳಸಿದ್ಧ ದೇವಾಲಯದ ಶಿಖರದಲ್ಲಿ ಶ್ರೀಪೀಠದ ಮೂಲಗೋತ್ರ ಪುರುಷನಾದ ನಿಂತ ನಂದಿ ವಿಗ್ರಹವಿದೆ. ಪೀಠದ ಮಠ ಮತ್ತು ದೇವಾಲಯ ಗಳು ಗೋಡೆಗಳಿಂದ ಆವೃತಗೊಂಡಿವೆ. ಪೀಠದ ವಿಶಾಲ ವಾಸ್ತು-ಶಿಲ್ಪಕಲೆ ಹಾಗೂ ಅದರ ಸಾಂಸ್ಕೃತಿಕ ವೈವಿಧ್ಯತೆಯನ್ನು ನೋಡಿ ಹಂಪಿಯನ್ನು ಹೊರನೋಡು, ಉಜ್ಜಯಿನಿಯನ್ನು ಒಳನೋಡು ಎಂಬ ನಾಣ್ನುಡಿ ಹುಟ್ಟುಕೊಂಡಿದೆ. 

ಮಹಾದ್ವಾರಗಳು: ಉಜ್ಜಯಿನಿ ಸದ್ಧರ್ಮ ಪೀಠಸ್ಥಳದ ಸುತ್ತಲೂ ಪ್ರಾಕಾರವಿದ್ದು ಉತ್ತರ ದಕ್ಷಿಣ ದಿಕ್ಕಿನ ಗೋಡೆಗಳಲ್ಲಿ ಗೋಪುರ ಸಹಿತ ಮಹಾದ್ವಾರಗಳಿವೆ. ತಂಗಾಳಿ ಗೋಪುರವೆಂದು ಕರೆಯುವ ಉತ್ತರ ದ್ವಾರ, ದಕ್ಷಿಣ ದ್ವಾರ-ಕೈಲಾಸ ದ್ವಾರವೆಂದು ಕರೆಯುವ ಈ ಎರಡು ಮಹಾದ್ವಾರಗಳು ಇತ್ತೀಜಿನ ವರ್ಷಗಳಲ್ಲಿ ಜೀರ್ಣೋದ್ಧಾರಗೊಂಡಿವೆ. ದಕ್ಷಿಣ ಮಹಾದ್ವಾರದ ಮೇಲೆ ವರ್ಣಮಯ ಶಿವಪಾರ್ವತಿಯರ ವಿಗ್ರಹವನ್ನು ಪ್ರತಿಷ್ಠಾಪಿಸಿದೆ. ಬದಿಗಳಲ್ಲಿ ಶ್ರೀಪೀಠದ ಲಿಂಗೈಕ್ಯ ಜಗದ್ಗುರುಗಳಾದ ಸಿದ್ದಲಿಂಗಶಿವಚಾರ್ಯರ ಮತ್ತು ಸಿದ್ದೇಶ್ವರ ಶಿವಾಚಾರ್ಯರ ಗಾರೆ ವಿಗ್ರಹಗಳಿವೆ. ಅಧಿಷ್ಠಾನದಲ್ಲಿ ಭಕ್ತರ ಹಾಗೂ ಇನ್ನಿತರ ಶಿಲ್ಪಗಳಿವೆ.
ಉತ್ತರದ ಮಹಾದ್ವಾರಕ್ಕೆ ಎತ್ತರವಾದ ಗೋಪುರವಿದ್ದು ಅದರಲ್ಲಿ ನಾಲ್ಕು ಅಂತಸ್ತುಗಳಿವೆ. ದ್ವಾರ ಬಂಧದಲ್ಲಿ ನಾಲ್ಕು ಶಾಖೆಗಳಿವೆ. ಇವುಗಳ ಪಕ್ಕದಲ್ಲಿ ಶೈವದ್ವಾರಪಾಲಿಕರ ಮತ್ತು ದ್ವಾರ ಕಂಬದ ಬದಿಗಳಲ್ಲಿ ಪುಷ್ಪಧಾರಣಿಯ ಶಿಲ್ಪಗಳಿವೆ. ಲಲಾಟ ಬಿಂಬದಲ್ಲಿ ನಂದಿ ಸಮೇತ ಶಿವಪಾರ್ವತಿಯರ ಬಿಂಬವಿದೆ. ಅದರ ಬದಿಗಿನ ಒಳಮುಖ ಪಟ್ಟಿಕೆಯಲ್ಲಿ ಶೈವ ದ್ವಾರಪಾಲಕ ತ್ರಿಭಂಗಿಯಲ್ಲಿ ನಿಂತಿದ್ದಾನೆ. ಉತ್ತರದ ಮಹಾದ್ವಾರದ ಒಳಗಡೆ ಪ್ರವೇಶದ ಪಾಶರ್ವ್‌ಗಳಲ್ಲಿನ ಎತ್ತರದ ಅಧಿಷ್ಠಾನದಲ್ಲಿ ಸಿಂಹ, ಆಂಜನೇಯ ಮತ್ತು ನಾಗರಹಾವಿನ ಉಬ್ಬುಶಿಲ್ಪಗಳಿದ್ದು ಛತ್ತಿನಲ್ಲಿ ಕಮಲದ ಅಲಂಕರಣವಿದೆ. ಉತ್ತರದ ಮಹಾದ್ವಾರದ ಎದುರಿಗೆ ಭವ್ಯವಾದ ಸ್ತಂಭಗಳುಳ್ಳ ಒಂದು ಉಯ್ಯಾಲೆ ಮಂಟಪವಿದೆ. ಈ ಮಂಟಪದ ಕಂಬಗಳ ಮೇಲೆ ಅಲ್ಲಲ್ಲಿ ಉಬ್ಬು ಶಿಲ್ಪಗಳಿದ್ದು ಅವು ಆನೆ, ದ್ವಾರಪಾಲಕ, ಹಂಸ, ಬಾಳೆಯ ಗಿಡ, ಶಿವಲಿಂಗವನ್ನು ಪುಜಿಸುವ ಕಿನ್ನರ, ಬೇಡರ ಕಣ್ಣಪ್ಪ, ನೃತ್ಯಗಾರರು, ನಟರಾಜ, ನೃತ್ಯಗಾರ್ತಿ, ಕೈಮುಗಿದು ಕುಳಿತ ಟಗರು ತಲೆಯುಳ್ಳ ದಕ್ಷಬ್ರಹ್ಮ ಮುಂತಾದ ಉಬ್ಬುಶಿಲ್ಪಗಳಿವೆ.

ಮರುಳಸಿದ್ಧ ದೇವರ ದೊಡ್ಡ ದೇವಾಲಯ ಉತ್ತರಾಭಿಮುಖವಾಗಿದೆ. ಇದರಲ್ಲಿ ಐದು ಗರ್ಭಗೃಹಗಳು, ಒಂದು ಅಂತರಾಳ ಮಹಾಮಂಟಪ ಮತ್ತು ಮೂರು ಮುಖಮಂಟಪ ಗಳಿವೆ. ಗರ್ಭಗೃಹದಲ್ಲೂ ಸಿದ್ದೇಶ್ವರ ಅಥವಾ ಜಗದ್ಗುರು ಮರುಳಸಿದ್ದಸ್ವಾಮಿ ಶಿವಲಿಂಗವಿದೆ. ಶಿವಲಿಂಗಕ್ಕೆ ಸ್ವಾಮಿಯ ಮುಖವಾಡವನ್ನು ಧರಿಸುವರು. ಸಭಾಮಂಟಪದಲ್ಲಿ ನಾಲ್ಕು ಕೇಂದ್ರ ಸ್ತಂಭಗಳುಳ್ಳ ರಂಗಮಂಟಪವಿದೆ. ಇದರ ಮಧ್ಯ ಛತ್ತಿನಲ್ಲಿ ಗೋಲಾಕಾರದ ಸಹಸ್ರದಳವುಳ್ಳ ಕಮಲದ ಭುವನೇಶ್ವರಿ ಕೆತ್ತನೆ ವೈಶಿಷ್ಟ್ಯಪೂರ್ಣವಾಗಿದೆ. ಕಂಬಗಳ ಬೋದುಗೆಯ ಮೇಲೆ ಛತ್ತಿನಲ್ಲಿ ಚೌಕಾದ ಪಟ್ಟಿಕೆಗಳಿದ್ದು ಅವುಗಳಲ್ಲಿ ಪತ್ನಿಯರ ಸಮೇತ ವಾಹನರೂಢರಾದ ಅಷ್ಟದಿಕ್ಪಾಲಕರ ಶಿಲ್ಪಗಳಿವೆ. ಭುವನೇಶ್ವರಿಯ ಮೂರನೆಯ ಮತ್ತು ಆರನೆಯ ಸುತ್ತುಗಳಲ್ಲಿ ಕ್ರಮವಾಗಿ 126 ಮತ್ತು 32 ಚೆಲುವಿನ ಸ್ತ್ರೀ ವಿಗ್ರಹಗಳಿವೆ. ಇದರ ಮಧ್ಯಭಾಗದಲ್ಲಿ ನಕ್ಷತ್ರಾಕಾರದ ಮೂರು ವೃತ್ತಾಕಾರ ಪಟ್ಟಿಕೆಗಳಿವೆ. ಈ ಪಟ್ಟಿಕೆಗಳ ಒಳಮುಖದಲ್ಲಿ ಕಿರು ಕಮಲಗಳಿವೆ. ಈ ಕಮಲ ಪೀಠಗಳ ಮೇಲೆ ಸುತ್ತಲೂ 174 ಯತಿವರ್ಯರ ಶಿಲ್ಪಗಳಿರುವುದು ಒಂದು ಅಪರೂಪದ ವಿಶಿಷ್ಟ ಲಕ್ಷಣ. ಸಭಾಮಂಟಪವೂ 15 ಅಂಕಣಗಳಷ್ಟು ವಿಸ್ತಾರವಾಗಿದ್ದು ಮಧ್ಯದಲ್ಲಿ ಐದೈದು ಕಂಬಗಳ ಎರಡು ಸಾಲುಗಳಿವೆ. ಇದರ ಒಂದೊಂದು ಬದಿಯಲ್ಲಿ ಎರಡೆರಡು ಗರ್ಭಗೃಹಗಳಿವೆ. ಅಂತರಾಳದ ಹೊರಗಿನ ಎರಡು ಬದಿಗಳಲ್ಲಿ ಮತ್ತು ಸಭಾ ಮಂಟಪದ ಎರಡು ಬದಿಗಳಲ್ಲಿ ಎರಡೆರಡು, ಒಟ್ಟು ಹತ್ತು ದೇವಕೋಷ್ಠಗಳಿವೆ. ಅಂತರಾಳದ ಬದಿಗಳಲ್ಲಿಯ ದೇವಕೋಷ್ಠಗಳಲ್ಲಿ ಗಣೇಶ ಮತ್ತು ವಸ್ತ್ರಾಭರಣಗಳಿಂದ ಅಲಂಕೃತನಾಗಿ ಪದ್ಮಾಸನದಲ್ಲಿರುವ ಒಬ್ಬ ಯತಿಯ ಶಿಲ್ಪವಿದೆ. ಹಸ್ತಗಳ ಯೋಗಮುದ್ರೆ ಯಲ್ಲಿವೆ. ಇದು ಪಂಚಾಚಾರ್ಯರಲ್ಲಿ ಒಬ್ಬರಾದ ಪಂಡಿತಾರಾಧ್ಯರನ್ನೂ ಪ್ರತಿನಿಧಿಸುತ್ತದೆಯೆಂದು ಹೇಳಿಕೆ.

ಸಭಾಮಂಟಪ ಮತ್ತು ಉತ್ಸವ ಮಂಟಪಗಳ ಬದಿಗೆ ನಂದಿಯ ವಿಗ್ರಹವಿದೆ. ನಂದಿಯನ್ನು ಮರುಳಸಿದ್ಧ ಸ್ವಾಮಿಯ ಕಡೆಗೆ ಮುಖಮಾಡಿ ಕೂಡಿಸಲಾಗಿದೆ. ಸಭಾಮಂಟಪದ ಬಲಗಡೆ ಎರಡನೆಯ ಗರ್ಭಗೃಹದಲ್ಲಿ ಭವ್ಯವಾದ ಗೋಪಾಲಕೃಷ್ಣನ ವಿಗ್ರಹವನ್ನು ಅಲಂಕೃತ ಆಯತಾಕಾರದ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಸಭಾಮಂಟಪದ ಎಡಬದಿಯ ಎರಡನೆಯ ಗರ್ಭಗೃಹ ಚಚ್ಚೌಕಾಗಿದ್ದು ಅದರ ಮಧ್ಯದಲ್ಲಿ ಎತ್ತರ ಆಯತಾಕಾರ ಪೀಠದ ಮೇಲೆ ದ್ವಿಭುಜ ವೀರಭದ್ರನ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ. ವೀರಭದ್ರನಿಗೆ ವಸ್ತ್ರಾಭರಣದ ಜೊತೆ ರುಂಡಮಾಲೆಯನ್ನು ಧರಿಸಲಾಗಿದೆ. ಬಾಗಿಲು ಚೌಕಟ್ಟಿನಲ್ಲಿರುವ ಶೈವ ದ್ವಾರಪಾಲಕರ ಕೈಗಳಲ್ಲಿ ಕತ್ತಿ, ಡಮರು, ತ್ರಿಶೂಲ ಮತ್ತು ನಾಗಗಳಿವೆ. ಲಲಾಟಬಿಂಬದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ. ವೀರಭದ್ರನ ಗರ್ಭಗೃಹದ ಉತ್ತರ ಮುಖದ ಹೊರಗೋಡೆಯ ಗೂಡಿನಲ್ಲಿ ಯೋಗಮುದ್ರೆಯಲ್ಲಿ ಕುಳಿತ ಯತಿಯ ವಿಗ್ರಹವಿದೆ. ಬದಿಗಳಲ್ಲಿ ಹಣ್ಣಿನ ತಾಟುಹಿಡಿದ ಸೇವಕಿಯರು, ಇಬ್ಬರು ವಾದ್ಯಮೇಳದವರೂ ಇದ್ದಾರೆ. ಸಭಾಮಂಟಪದ ಎಡಗಡೆ ಮತ್ತು ಗೋಪಾಲಕೃಷ್ಣನ ಗರ್ಭಗುಡಿಯ ಮುಂದೆ ಇರುವ ಮಂಟಪದಲ್ಲಿ ಶ್ರೀಮರುಳಸಿದ್ಧಸ್ವಾಮಿಯ ಮತ್ತು ಗೌರಮ್ಮರುಳ್ಳ ವಿಗ್ರಹಗಳಿವೆ. ಶಿವ-ಪಾರ್ವತಿಯರ ಪ್ರತಿರೂಪದಲ್ಲಿ ಬೆಳ್ಳಿ ಲೋಹದ ಈ ವಿಗ್ರಹವನ್ನು ಉತ್ಸವಮೂರ್ತಿಯನ್ನಾಗಿ ಬಳಸುವರು. ಈ ಸಭಾಮಂಟಪದ ಮುಂದಿನ ಕಂಬದಲ್ಲಿ ಸೇವುಣರ ಕಾಲದ (1268) ಒಂದು ಶಾಸನವೂ ಸಭಾಮಂಟಪದ ಮುಂದಿನ ಅಂಕಣದ ತೊಲೆಯಲ್ಲಿ ಒಂದು ಶಾಸನವೂ ಇದೆ. ಇಲ್ಲಿರುವ ಎರಡು ಲೋಹದ ಗಂಟೆಗಳ ಮೇಲೂ ಶಾಸನಗಳಿವೆ. ಹಾಗೇ ಸಭಾಮಂಟಪದ ಪೂರ್ವ-ಪಶ್ಚಿಮದಲ್ಲಿ ಇರುವ ಎರಡು ಮುಖಮಂಟಪಗಳಿವೆ. ಪಶ್ಚಿಮ ಮುಖಮಂಟಪದ ಎಡಭಾಗದ ಕಟ್ಟೆಯ ಮೇಲೆ ಕತ್ತಿಯನ್ನು ಕೆಳಗಡೆ ಇಟ್ಟು ನಿಂತಿರುವ ಭಕ್ತನೊಬ್ಬನ ಶಿಲ್ಪವಿದೆ. ಆತನ ಬಲಗಡೆಯ ಕಟ್ಟೆಯ ಮೇಲೆ ವಿಜಯನಗರ ಅರಸ ಸದಾಶಿವರಾಯನ ಕಾಲದ ಶಾಸನವಿದೆ.

ಮಹಾಮಂಟಪದಲ್ಲಿ ಬೃಹದಾಕಾರದ ವೀರಭದ್ರನ ವಿಗ್ರಹವಿದೆ. ವೀರಭದ್ರ ಚತುರ್ಭು ಜಧಾರಿ, ಕೈಗಳಲ್ಲಿ ಕತ್ತಿ, ಬಾಣ, ಬಿಲ್ಲು ಮತ್ತು ಗುರಾಣಿಗಳಿವೆ. ಕಿರೀಟದಲ್ಲಿ ಚಿಕ್ಕ ಶಿವಲಿಂಗವಿದೆ. ಹಣೆಯ ಮಧ್ಯ ಮೂರನೆಯ ಕಣ್ಣಿದೆ. ಆತನು ಕಿರೀಟಮುಕುಟ, ಕುಂಡಲ, ಹಾರ ರುಂಡಮಾಲ, ಪಟ್ಟಿ, ಕಡಗ, ಬಳೆ ಇತ್ಯಾದಿ ಆಭರಣಗಳನ್ನು ಧರಿಸಿದ್ದಾನೆ. ಸೊಂಟಪಟ್ಟಿ ಯಲ್ಲಿ ಕಠಾರಿಯನ್ನು ಕಟ್ಟಿದ್ದಾನೆ. ಕೆಳಗಡೆ ಬಲಕ್ಕೆ ದಕನು ಕೈಮುಗಿದು ನಿಂತಿದ್ದಾನೆ.

ಅರಿಕೆಗುಡಿ: ಮರುಳಸಿದ್ಧ ದೇವಾಲಯದ ಮಹಾಮಂಟಪಕ್ಕೆ ಹೊಂದಿದ ನಂದಿ ದೇವಾಲಯದ ಹಿಂದುಗಡೆ ಇರುವ ದೇವಾಲಯವನ್ನು ಅರಿಕೆಗುಡಿ ಎಂದು ಕರೆಯುವರು. ಭಿತ್ತಿಯ ಮೂರು ಮುಖಗಳ ಮಧ್ಯಭಾಗದಲ್ಲಿ ಪದ್ಮಾಸನದಲ್ಲಿ ಕುಳಿತಿರುವ ಶಿವನ ವಿಗ್ರಹವಿದ್ದು ಪೀಠದಲ್ಲಿ ನಂದಿಯಿದೆ. ನೃತ್ಯ ಗಣೇಶ, ಗೋಪಾಲಕೃಷ್ಣ, ವೀರಭದ್ರ ಮುಂತಾದ ವಿಗ್ರಹಗಳಿವೆ. ಮರಳಸಿದ್ಧ ದೇವಾಲಯದ ಗರ್ಭಗೃಹದ ಪಶ್ಚಿಮ ಗೋಡೆಯ ಪ್ರನಾಳ ಪಟ್ಟಿಕೆಯನ್ನು ಬದಿಯ ಮಜ್ಜನ ಕುಂಡ ತೀರ್ಥಕ್ಕೆ ಸೇರಿಸಲಾಗಿದ್ದು ದೇವರ ಅಭಿಷೇಕದ ನೀರು ಪೀಠದ ಜಲಹರಿಯ ಮೂಲಕ ಮಜ್ಜನ ಕುಂಡವನ್ನು ಸೇರುವುದು. ಈ ಕುಂಡಕ್ಕೆ ಒಂದು ತೆರೆದ ಸ್ತಂಭ ಮಂಟಪವಿದ್ದು ಅದಕ್ಕೆ ಎತ್ತರದ ಅಧಿಷ್ಠಾನ ಮತ್ತು ದ್ರಾವಿಡ ಮಾದರಿಯ ಶಿಖರವಿದೆ. ಈ ದೇವಾಲಯದ ಸಭಾಮಂಟಪ ಮತ್ತು ಮಹಾಮಂಟಪಗಳ ಮಾಳಿಗೆ ಅಂಚಿನ ಸುತ್ತಲೂ ಇಟ್ಟಿಗೆ-ಗಾರೆಯ ಗೋಡೆಯಿದ್ದು ಅದರಲ್ಲಿ ಸಾಲಾಗಿ ಗೂಡುಗಳಿವೆ. ಈ ಗೂಡುಗಳಲ್ಲಿ ಗಾರೆಯ ದೇವತೆಗಳ ಬಣ್ಣದ ವಿಗ್ರಹಗಳಿವೆ. ಈ ದೇವಾಲಯದ ಎಡಬದಿಯಲ್ಲಿ ಅದಕ್ಕೆ ಸಮಾನಾಂತರವಾಗಿ ಪುರ್ವಾಭಿಮುಖವಾದ ಗೌರಮ್ಮ ದೇವಾಲಯವಿದೆ. ಇಲ್ಲಿರುವ ಪಾರ್ವತಿಯ ವಿಗ್ರಹವನ್ನೆ ಗೌರಮ್ಮನೆಂದು ಕರೆಯುವರು. ಈ ದೇವಿಯು ದ್ವಿಭುಜಳಾಗಿ, ಕೈಗಳಲ್ಲಿ ಕಮಲಗಳನ್ನು ಎತ್ತಿ ಹಿಡಿದಿದ್ದು, ವಸ್ತ್ರಾಭರಣಭೂಷಿತಳಾಗಿದ್ದಾಳೆ. ಗರ್ಭಗೃಹದ ಮೇಲೆ ದ್ರಾವಿಡ ಮಾದರಿಯ ಶಿಖರವಿದ್ದು ಅದರ ಮುಂದೆ ದೇವಕೋಷ್ಟವುಳ್ಳ ಅರ್ಥವೃತ್ತಾಕಾರದ ಶುಕನಾಸಿಯಿದೆ.

ಮರುಳಸಿದ್ಧ ದೇವಾಲಯದ ಹಿಂಭಾಗದಲ್ಲಿ ಒಂದು ಶಿಲಾಸ್ತಂಭ ಮತ್ತೆರಡು ಕಬ್ಬಿಣದ ದೀಪಸ್ತಂಭಗಳು ಇದರ ಮುಂಭಾಗದಲ್ಲಿವೆ. ಒಂದು ದೀಪಸ್ತಂಭದಲ್ಲಿ ಕೈಮುಗಿದು ಕುಳಿತ ಭಕ್ತ, ನಂದಿ, ಗಣೇಶ ಹಾಗೂ ನಟರಾಜನ ಚಿತ್ರಗಳಿವೆ. ನಟರಾಜನು ನಾಗರ ಹಾವಿನ ಮೇಲೆ ನೃತ್ಯ ಮಾಡುತ್ತಿದ್ದು ಬಲಗೈಯಲ್ಲಿ ಫಲ ಮತ್ತು ಎಡಗೈಯಲ್ಲಿ ನಾಗರಹಾವಿನ ಬಾಲವನ್ನು ಹಿಡಿದಿರುವ ಚಿತ್ರವಿದೆ. ಇವುಗಳ ಜೊತೆಗೆ ಈ ದೇವಾಲಯ ಬದಿಗಳಲ್ಲಿ ಏಕಶಿಲೆಯ ಎರಡು ನಂದಿಕಂಬಗಳನ್ನು ನಿಲ್ಲಿಸಲಾಗಿದೆ. ಈ ದೇವಾಲಯದ ಎದುರಿಗೆ ನಂದಿ ಮಂಟಪವಿದೆ. ಇಲ್ಲಿ ಯತಿಗಳುಳ್ಳ ತೋರಣದ ಮಧ್ಯಭಾಗದಲ್ಲಿ ನವಗ್ರಹ ಪೀಠವಿದ್ದು ಅದನ್ನು ಎತ್ತರದ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಮಧ್ಯದಲ್ಲಿ ಜೋಡುಪಾದಗಳ ಉಬ್ಬುಶಿಲ್ಪವಿದೆ. ಈ ಪಾದಗಳ ಸುತ್ತಲೂ ಕಮಲಗಳ ಅಲಂಕರಣವಿದೆ.

ಬಸವಣ್ಣನ ದೇವಾಲಯ ಬಂಗಾರ ಬಸವಣ್ಣನ (ನಂದಿ) ದೇವಾಲಯದ ಪೂರ್ವಕ್ಕಿದ್ದು ದಕ್ಷಿಣಕ್ಕೆ ಮುಖಮಾಡಿದೆ. ಇದನ್ನು ಬಂಗಾರದ ಕಾಳಮ್ಮ ದೇವಾಲಯವೆಂದೂ ಕರೆಯುವರು. ಇದು ಏಕಕೂಟ ಮಾದರಿಯ ದೇವಾಲಯವಾಗಿದ್ದು ಇದರ ನಾಲ್ಕು ಮೂಲೆಗಳಲ್ಲಿ ನಾಲ್ಕು ಅರ್ಧಗಂಭಗಳಿವೆ. ಇದರ ಮಧ್ಯದಲ್ಲಿ ನಂದಿಯ ವಿಗ್ರಹವಿದೆ. ಬದಿಗಳಲ್ಲಿ ಶ್ರವಣಕುಮಾರ ಮತ್ತು ಗುಂಡ ಬ್ರಹ್ಮಯ್ಯರ ವಿಗ್ರಹಗಳಿವೆ. ಇಲ್ಲಿ ಶ್ರವಣಕುಮಾರ ತನ್ನ ತಂದೆ-ತಾಯಿಗಳನ್ನು ಕಾವಡಿಯಲ್ಲಿ ಹೊತ್ತುಕೊಂಡು ನಡೆಯುವ ದೃಶ್ಯವಿದೆ. ಹಾಗೂ ಇಲ್ಲಿ ಗುಂಡಬ್ರಹ್ಮಯ್ಯರಿಬ್ಬರು ಶಿವಲಿಂಗವನ್ನು ತಮ್ಮ ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯನ್ನು ಅದರ ಮೇಲಿಟ್ಟು ನಿಂತಿರುವರು. ಈರ್ವರ ಮಧ್ಯ ಎರಡು ಈಟಿಗಳನ್ನು ಸಮಾಂತರದಲ್ಲಿ ಮೇಲಕ್ಕೆ ಮುಖಮಾಡಿ ನಿಲ್ಲಿಸಲಾಗಿದೆ. ಇಬ್ಬರ ಮೇಲಿರುವ ಮಕರ ತೋರಣದ ಮಧ್ಯದಲ್ಲಿ ಕೀರ್ತಿಮುಖವನ್ನು ಚಿತ್ರಿಸಲಾಗಿದೆ.
ಗೌರಮ್ಮ ದೇವಾಲಯ, ಅದರ ಮಜ್ಜನ ಕುಂಡದ ಮಂಟಪ, ಬಂಗಾರ ಬಸವಣ್ಣನ ದೇವಾಲಯ, ದೀಪಸ್ತಂಭಗಳು, ನಂದಿಸ್ತಂಭಗಳು, ನವಗ್ರಹ ಪೀಠ, ನಂದಿ ದೇವಾಲಯ ಪ್ರಾಕಾರ ಗೋಡೆ-ಮಹಾದ್ವಾರ-ಗೋಪುರ, ಉಯ್ಯಾಲೆ ಕಂಬ, ಶ್ರವಣಕುಮಾರನ ಶಿಲ್ಪ ಇವುಗಳು ವಿಜಯನಗರ ಕಾಲದ ಶೈಲಿಯಲ್ಲಿವೆ. ಕಾಲ ಸು. 15-18ನೆಯ ಶತಮಾನ. ಉಳಿದವುಗಳು ಸು. 12-13ನೆಯ ಶತಮಾನ.
ಮರುಳಸಿದ್ಧ ದೇವಾಲಯದ ಎಡಬದಿಗೆ ಪಶ್ಚಿಮದ ಪ್ರಾಕಾರ ಗೋಡೆಗೆ ಹೊಂದಿಕೊಂಡು ಉಜ್ಜಯಿನಿ ಸದ್ಧರ್ಮ ಸಿಂಹಾಸನ ಪೀಠದ ಭವ್ಯ ಮಠವಿದೆ. ಈ ಮಠವನ್ನು ಇತ್ತೀಚೆಗೆ ಜೀರ್ಣೋದ್ಧಾರಗೊಳಿಸಿದ್ದು ಇದರ ಮೇಲೆ ಮಂಟಪ ಮತ್ತು ಬದಿಗಳಲ್ಲಿ ಕೋಣೆಗಳನ್ನು ನಿರ್ಮಿಸಲಾಗಿದೆ. ಪ್ರವೇಶದ್ವಾರದ ಮೇಲೆ ಶಿವ-ಪಾರ್ವತಿಯರು ನಂದಿಯ ಮೇಲೆ ಆಸೀನರಾ ಗಿರುವ ಬೃಹತ್ ವರ್ಣಮಯ ಗೊಂಬೆಗಳಿವೆ. ಪ್ರವೇಶದ್ವಾರದ ಮುಖಮಂಟಪದ ಮೊದಲ ಕಂಬದ ಮೇಲೆ ಕಮಲವಿಡಿದ ಆನೆಗಳ ಸಾಲು, ಹಾರ-ಹೂ ಬಳ್ಳಿಗಳ ಅಲಂಕರಣಗಳಿವೆ. ಈ ಕಂಬದ ದಕ್ಷಿಣ ಮುಖದ ಒಂದನೆಯ ಪಟ್ಟಿಕೆಯಲ್ಲಿ ಶಿವನು ಪಾರ್ವತಿಯ ಗಲ್ಲವನ್ನು ಹಿಡಿದಿರುವ ಚಿತ್ರವಿದೆ. ಬದಿಗಳಲ್ಲಿ ಸೇವಕಿಯರು ಕಮಲಗಳನ್ನು ಹಿಡಿದು ನಿಂತಿರುವರು. ಎರಡನೆಯ ಪಟ್ಟಿಕೆಯಲ್ಲಿ ನೃತ್ಯಗಾರ್ತಿಯರಿದ್ದಾರೆ. ಮೂರರಲ್ಲಿ ಹಾರ ಮತ್ತು ಗಿಳಿಗಳ ಚಿತ್ರಗಳಿವೆ. ಎರಡನೆಯ ಕಂಬದ ಪಶ್ಚಿಮ ಮುಖದ ಮೊದಲನೆಯ ಪಟ್ಟಿಕೆಯಲ್ಲಿ ಷಣ್ಮುಖನು ನವಿಲನ್ನೇರಿ ಕುಳಿತಿದ್ದಾನೆ. ಎರಡನೆಯ ಫಲಕದಲ್ಲಿ ಭಕ್ತರು ನಂದಿ ಮುಖವುಳ್ಳ ಮಾನವನನ್ನು ತಮ್ಮ ಮೇಲೆ ಕೂಡಿಸಿಕೊಂಡಿರುವ ಇನ್ನೂ ಕೆಲವು ಚಿತ್ರಿಗಳಿವೆ. ಈ ಕಂಬದ ಉತ್ತರ ಮುಖದ ಪಟ್ಟಿಕೆಯಲ್ಲಿ ಯತಿವರ್ಯರ ಮಧ್ಯ ಲಕ್ಷ್ಮಿ ಯಿರುವಳು. ನಾಲ್ಕನೆಯ ಪಟ್ಟಿಕೆಯಲ್ಲಿ ಹಂಸ, ನವಿಲು, ಸೇವಕಿಯರಿದ್ದಾರೆ. ಅವರ ಮೇಲೆ ರೆಕ್ಕೆಯುಳ್ಳ ಅಪ್ಸರೆಯರು ಯತಿಯನ್ನು ಒಯ್ಯುತ್ತಿರುವ ದೃಶ್ಯವಿದೆ. ಮಠದ ಮಹಾದ್ವಾರದ ಬಾಗಿಲಲ್ಲಿರುವ ಕುಸುರಿ ಕೆತ್ತನೆಯ ಅಲಂಕರಣ ಹೊಯ್ಸಳ ಮಾದರಿಯನ್ನು ನೆನಪು ಮಾಡುತ್ತದೆ. ಇತರೆ ತೋರಣಗಳ ಮಧ್ಯೆ ದೇವತೆಗಳ ತೋರಣದಲ್ಲಿ ಒಂದೇ ಸಾಲಿನಲ್ಲಿ ಅಷ್ಟದಿಕ್ಪಾಲರನ್ನು ತೋರಿಸಲಾಗಿದೆ. ಮಠದ ಕಟ್ಟಿಗೆಯ ಕಂಬಗಳು, ಬಾಗಿಲ ಚೌಕಟ್ಟು ಇತ್ಯಾದಿಗಳ ಕಾಲ 19ನೆಯ ಶತಮಾನದ ಅಂತ್ಯಭಾಗದ್ದೆನ್ನುವರು. ಈ ಮಠದ ಒಳಗಡೆ ಒಂದು ವಿಶಾಲವಾದ ಕಟ್ಟಿಗೆಯ ಸ್ತಂಭ ಮಂಟಪವಿದ್ದು ಅದನ್ನು ದಾರುಕ ಮಂಟಪವೆಂದು ಕರೆಯುವರು. ಅಲ್ಲಿ ಧಾರ್ಮಿಕ ಕ್ರಿಯೆಗಳು ಜರುಗುತ್ತವೆ. ಅವು ವಟುಗಳಿಗೆ ಅಯ್ಯಾಚಾರ, ಅಶುದ್ಧರಾದವರನ್ನು ಶುದ್ಧಗೊಳಿಸುವುದು ಇತ್ಯಾದಿಗಳಾಗಿವೆ. ದಾರುಕ ಮಂಟಪ ಪಕ್ಕದಲ್ಲಿ ಪಶ್ಚಿಮಕ್ಕೆ ಪೀಠದ ಪೂರ್ವ ಜಗದ್ಗುರುಗಳ ಶಿವಪುಜಾ ಮಂದಿರವಿದೆ ಹಾಗೂ ಶಿಲೆಯ ಗಣೇಶ ಮತ್ತು ನಾಗ ವಿಗ್ರಹಗಳಿವೆ. ದಾರುಕ ಮಂಟಪಕ್ಕೆ ಹೊಂದಿ ಉತ್ತರಕ್ಕೆ ನ್ಯಾಯಾಲಯದ ಕೊಠಡಿಯಿದೆ. ಅಲ್ಲಿ ಪೀಠದ ಜಗದ್ಗುರುಗಳ ನ್ಯಾಯ ಕಟ್ಟೆಯಿದೆ. ಅಲ್ಲಿ ಮಠದಯ್ಯಗಳ ಮತ್ತು ಇನ್ನಿತರರ ಜಗಳ, ವ್ಯಾಜ್ಯಗಳನ್ನು ಇತ್ಯರ್ಥ ಮಾಡಲಾಗುತ್ತಿತ್ತು. ಈ ಕೊಠಡಿಯ ಒಂದು ಕಂಬದಲ್ಲಿ ಮಲೆನಾಡಿನ ದುರ್ಗಮ್ಮನ ಲೋಹದ ವಿಗ್ರಹವಿರುವುದು ವಿಶಿಷ್ಟ. ಈ ಕೋಣೆಯ ಹಿಂಬದಿಯಲ್ಲಿ ಖಜಾನೆ ಮತ್ತು ಸ್ನಾನದ ಕೊಠಡಿಗಳಿವೆ. ದಾರುಕ ಮಂಟಪ, ಶಿವಪುಜಾ ಮಂದಿರ, ನ್ಯಾಯಾಲಯ ಈ ಭಾಗಗಳೆಲ್ಲ ಸುಮಾರು ಇನ್ನೂರು ವರ್ಷ ಪ್ರಾಚೀನದ್ದಾಗಿವೆ. ಇಲ್ಲಿ ವಿಶಾಲವಾದ ಶಿಲಾಸ್ತಂಭ ಗಳುಳ್ಳ ಪಂಚಾಚಾರ್ಯರ ಮಂಟಪವಿದ್ದು ಏಕಸಾಲಿನಲ್ಲಿ ಐದು ಎತ್ತರದ ಆಸನ ಕಟ್ಟೆಗಳಿವೆ. ಪಂಚಾಚಾರ್ಯರು ಈ ಪೀಠಗಳಲ್ಲಿ ಕುಳಿತು ಭಕ್ತರಿಗೆ ಧರ್ಮೋಪದೇಶ ಮಾಡುತ್ತಿದ್ದರೆನ್ನುವರು.

ಪಂಚಾಚಾರ್ಯರ ಮಂಟಪಕ್ಕೆ ಹೊಂದಿ ಉತ್ತರಕ್ಕೆ ಒಂದು ವಿಶಾಲವಾದ ಗೋಶಾಲೆಯಿದೆ. ಹಿಂದೆ ಇಲ್ಲಿ 108 ಗೋವುಗಳನ್ನು ಕಟ್ಟಿ ಅವುಗಳ ಸಗಣಿಯಿಂದ ಬೆರಣಿ ಮಾಡಿ ಸುಟ್ಟು ವಿಭೂತಿ ಮಾಡಿಕೊಳ್ಳುತ್ತಿದ್ದರು. ಈಗ ಇವೆಲ್ಲ ಸ್ತಗಿತಗೊಂಡಿದೆ. ಗೋಶಾಲೆಯ ಪೂರ್ವಕ್ಕೆ ದಾಸೋಹ ಮಂದಿರವಿದೆ.

ಪೀಠದ ಪೂರ್ವ ಗೋಡೆಯ ಒಳಭಾಗದಲ್ಲಿ ಹಲವಾರು ಉಬ್ಬು ಶಿಲ್ಪಗಳಿದ್ದು ಅವುಗಳಲ್ಲಿ ಹಾವು-ಸೂರ್ಯನನ್ನು ನುಂಗಲು ಹೊರಟಿರುವ, ಜೋಡು ಮೀನುಗಳು ಒಂದನ್ನೊಂದು ಮುದ್ದು ಮಾಡುತ್ತಿರುವ, ಬೇಡರ ಕಣ್ಣಪ್ಪ ಮತ್ತು ಬತ್ತಲೆಯಲ್ಲಿ ಕುಳಿತ ಮಹಿಳೆ ಮುಖ್ಯವೆನಿಸಿವೆ. ಇವು ವಿಜಯನಗರ ಕಾಲದ್ದಾಗಿವೆ.	

ಉಜ್ಜಯನಿ ಸದ್ಧರ್ಮ ಪೀಠದ ದಕ್ಷಿಣ ಪ್ರವೇಶ ದ್ವಾರಕ್ಕೆ ಹೊಂದಿ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಯ ಗದ್ದುಗೆಯನ್ನು ನಿರ್ಮಿಸಲಾಗಿದೆ. ಈ ಗದ್ದುಗೆಯ ತಳಪಾಯ ಆಯತಾಕಾರದ ಗರ್ಭಗೃಹ ಮತ್ತು ಮುಖಮಂಟಪವನ್ನು ಹೊಂದಿದೆ. ಗರ್ಭಗೃಹದಲ್ಲಿ ಸಿದ್ಧಲಿಂಗಶಿವಾಚಾರ್ಯರ ಅಮೃತ ಶಿಲಾವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಈ ವಿಗ್ರಹದ ಗದ್ದುಗೆಯ ಮೇಲೆ ಸಿದ್ಧಲಿಂಗಶಿವಚಾರ್ಯರು ಲಿಂಗೈಕ್ಯರಾದ ದಿನಾಂಕ ಗುರುತಿಸಿದೆ.

ಇಲ್ಲಿರುವ ಇನ್ನಿತರ ಮುಖ್ಯ ದೇವಾಲಯಗಳಲ್ಲಿ ರಾಮಲಿಂಗ ದೇವಾಲಯ ಒಂದು. ಇದನ್ನು ರಾಮಿ ತಂದೆಯ ದೇವಸ್ಥಾನ ಎನ್ನುವರು. ಇಲ್ಲಿನ ನವರಂಗದಲ್ಲಿ ಆರು ವೀರ ಗಲ್ಲುಗಳಿವೆ. ತಲೆಬೋಳು ಸಿದ್ಧಪ್ಪನ ದೇವಾಲಯ, ಹರಿಜನಕೇರಿಯ ಮರುಳಸಿದ್ಧ ದೇವಾಲಯ ಮತ್ತು ಜಟ್ಟಿಪ್ಪನ ದೇವಾಲಯಗಳು ಮುಖ್ಯವಾದವು.

ನಂದಿಕಂಬ: ವಿವಿಧ ಎತ್ತರದ ಕಂಬಗಳ ತುದಿಯಲ್ಲಿ ಕುಳಿತ ನಂದಿಗಳುಳ್ಳ ನಂದಿ ಕಂಬಗಳು ಸಾಮಾನ್ಯವಾಗಿ ವೀರಶೈವ ಧಾರ್ಮಿಕ ಸ್ಥಳಗಳಲ್ಲಿ ಕಂಡುಬರುತ್ತವೆ. ಈ ಕಂಬಗಳಲ್ಲಿ ಭಕ್ತರ ಚಿತ್ರಗಳೂ ಇರುತ್ತವೆ. ಈ ರೀತಿಯ ನಂದಿ ಕಂಬಗಳು ಉಜ್ಜಯಿನಿ ಸದ್ಧರ್ಮ ಪೀಠದ ಸಂಕಿರಣದಲ್ಲಿ ಈ ಗ್ರಾಮದ ಸಾಂತನಳ್ಳಿ ಕೊಡದಪ್ಪನ ಮನೆಯ ಮುಂದೆ, ಸಿದ್ಧಲಿಂಗಯ್ಯನವರ ಮನೆಯ ಮುಂದೆ ಮತ್ತು ಜಟ್ಟೆಪ್ಪನ ಗುಡಿಯ ಮುಂದೆ ಇರುತ್ತವೆ. ಹನುಮಂತನ ಗುಡಿಗೆ ಹೋಗುವ ದಾರಿಯ ಬದಿಗಿರುವ ಸಿದ್ಧಲಿಂಗಯ್ಯನವರ ಮನೆ ಮುಂದೆ ಒಂದು ನಂದಿ ಕಂಬ ವಿದೆ. ಅದರ ಮೇಲೆ ಕುಳಿತ ಭಂಗಿಯ ನಂದಿಯಿದ್ದು ಅದರ ಒಂದು ಮುಖದಲ್ಲಿ ಭಕ್ತನೊಬ್ಬ ಕೈಮುಗಿದು ನಿಂತಿದ್ದಾನೆ. ಇನ್ನೊಂದು ಮುಖದಲ್ಲಿ ವೀರನೊಬ್ಬ ಕುದುರೆ ಸವಾರಿ ಮಾಡುತ್ತಿರುವನು. ಈ ಕಾಲದ ಒಂದು ನಂದಿಕಂಬ ಮತ್ತು ಅದರ ಮುಂದೆ ಒಂದು ಕಿರು ಶಾಸನಫಲಕ ಸಾಂತನಳ್ಳಿ ಕೊಡದಪ್ಪನ ಮನೆ ಮುಂದಿದೆ. ಇಲ್ಲಿಯ ನಂದಿಕಂಬದ ಶಾಸನದಲ್ಲಿ ಉಜ್ಜಯಿನಿ ಸಿದ್ಧೇಶ್ವರಸ್ವಾಮಿಯ ಪುಜಾರಿಯ ಹೆಂಡತಿ ಸಮಾಧಿ ಕೂತಳೆಂಬ ವಿವರವಿದೆ.
ಉಜ್ಜಯನಿಯಿಂದ ಸು.2ಕಿಮೀ ಅಂತರದಲ್ಲಿ ಭೈರವ ದೇವರ ಗುಡ್ಡವಿದೆ. ಆ ಗುಡ್ಡದಲ್ಲಿ ಕೋಟೆ ಗೋಡೆಗಳು ಇತ್ಯಾದಿ ಸಾಂಸ್ಕೃತಿಕ ಅವಶೇಷಗಳಿವೆ. ಅವುಗಳಲ್ಲಿ ಭೈರಸಿದ್ಧನ ವಿಗ್ರಹ ಮಹ್ತತ್ವದ್ದು. ಆ ವಿಗ್ರಹ ಮೂಲತಃ ಭೈರವನದು. ಅದರಲ್ಲಿ ಭೈರವನಿಗೆ ನಾಲ್ಕು ಕೈಗಳಿದ್ದು ಅವುಗಳಲ್ಲಿ ಕತ್ತಿ, ತ್ರಿಶೂಲ, ಡಮರು ಮತ್ತು ಕಪಾಲಗಳಿವೆ. ದೇಹದ ವಿವಿಧ ಭಾಗಗಳಲ್ಲಿ ನಾಗಗಳನ್ನು ಆಭರಣಗಳನ್ನಾಗಿ ಧರಿಸಿದ್ದು ಬತ್ತಲೆಯಾಗಿ ತ್ರಿಭಂಗಿಯಲ್ಲಿ ನಿಂತಿರುವನು. ಬದಿಗಳಲ್ಲಿ ಪ್ರೇತಗಳಿವೆ. ಈ ಶಿಲ್ಪದ ಕಾಲ ಸು.13ನೆಯ ಶತಮಾನ. ಚೌಕಿಮಠ, ಹಂಚಿನಮಠ, ಮಸ್ಲಟ್ಟಿ ಬಸಪ್ಪನ ಗುಡಿ, ಮಾಗಣ್ಣನ ಗುಡಿ, ಮಾರುತಿ ಗುಡಿ, ವನಿತಾದೇವಿ ಗುಡಿ, ಮಾರೆವ್ವನ ಗುಡಿ, ಬೀರೇಶ್ವರ ದೇವರ ಗುಡಿ, ಬ್ರಹ್ಮದೇವರ ಗುಡಿ, ಹುಣ್ಣಿ ಬಸಪ್ಪನ ಕಟ್ಟಿ ಮತ್ತು ಮೈಲಾರಲಿಂಗ-ಉಜ್ಜಯಿನಿ ಗ್ರಾಮದ ಇನ್ನಿತರ ವೀರಶೈವ ಮಠಗಳು ಮತ್ತು ಗ್ರಾಮದೇವತೆಗಳ ದೇಗುಲಗಳು. ಇವು ಸು.100 ವರ್ಷ ಪ್ರಾಚೀನವಾದವು. ಶ್ರೀ ಪೀಠದ ಮಠದ ಕಣದಲ್ಲಿ ಕೇದಾರಸ್ವಾಮಿ ಗದ್ದುಗೆ, ಮಳೆಸ್ವಾಮಿ ಗದ್ದುಗೆ, ಚಿನ್ನಬಸವಸ್ವಾಮಿ ಗದ್ದುಗೆ ಇವೆ.
ಇಲ್ಲಿಯ 1268ರ ಶಾಸನದಲ್ಲಿ ಮರುಳಸಿದ್ಧ ದೇವಾಲಯದ ದೇವರಿಗೆ ಮಲ್ಲಿಕಾರ್ಜುನ ನೆಂದು ಹೇಳಲಾಗಿದೆ. 1600ರ ವರೆಗಿನ ಎರಡು ಶಾಸನಗಳಲ್ಲಿ ಇದೇ ಹೆಸರಿದೆ. ತದನಂತರದ ಶಾಸನಗಳಲ್ಲಿ ಈ ದೇವಾಲಯದ ಹೆಸರು ಸಿದ್ದೇಶ್ವರ ಎಂದು ಉಲ್ಲೇಖವಾಗಿರುವುದು ಗಮನೀಯ.	(ಆರ್.ಎಂ.ಎಸ್.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ